ಕ್ರಾಪ್ಪೆ, ಅಲೆಕ್ಸಾಂಡರ್ ಹ್ಯಾಗರ್ಟಿ
1894-1947 ಅಂತರರಾಷ್ಟ್ರೀಯ ಖ್ಯಾತಿಪಡೆದ ಜಾನಪದ ವಿದ್ವಾಂಸ; ಭಾಷಾವಿಜ್ಞಾನಿ. ಇಪ್ಪತ್ತೈದರ ತರುಣನಾಗಿದ್ದಾಗ ಫ್ರೇಜರನ ಗೋಲ್ಡನ್ ಬೋ (ನೋಡಿ- ಗೋಲ್ಡನ್-ಬೋ,-ದಿ) ಕೃತಿಯನ್ನು ಓದಿದ. ಅಂದಿನಿಂದ ಈತನಿಗೆ ಜಾನಪದದಲ್ಲಿ ಆಸಕ್ತಿ ಮೂಡಿತು. ಆ ಕ್ಷೇತ್ರದಲ್ಲಿ ಕೆಲಸಮಾಡಿದ್ದ ಇನ್ನೂ ಅನೇಕ ಹಿರಿಯ ವಿದ್ವಾಂಸರ ಕೃತಿಗಳನ್ನೂ ಅಭ್ಯಾಸ ಮಾಡಿದ. ಆದರೆ ವಿಚಾರಧಾರೆ, ಸಂಶೋಧನೆಗಳಲ್ಲಿ ಈತ ಯಾವ ಪಂಥಕ್ಕೂ ಸೇರದೆ, ಯಾರ ಪ್ರಭಾವಕ್ಕೂ ಬೀಳದೆ ತನ್ನದೇ ದಾರಿ ಹಿಡಿದ. ಈತನ ಬಾಲ್ಯದ ವಿದ್ಯಾಭ್ಯಾಸ ಇಂಗ್ಲೆಂಡ್, ಹಾಲೆಂಡ್, ಜರ್ಮನಿಗಳಲ್ಲಿ ನಡೆಯಿತು. ಬರ್ಲಿನ್ ಅಯೋವ ಮತ್ತು ಚಿಕಾಗೋ ವಿಶ್ವವಿದ್ಯಾಲಯಗಳಲ್ಲಿ ಈತ ಉನ್ನತ ಶಿಕ್ಷಣ ಪಡೆದ. ಮಿನಿಸೋಟ ಹಾಗೂ ಕೊಲಂಬಿಯ ವಿಶ್ವವಿದ್ಯಾಲಯಗಳಲ್ಲಿ ಕೆಲವು ಕಾಲ ಅಧ್ಯಾಪಕನಾಗಿದ್ದ. 1928ರಿಂದ ಮುಂದೆ ಖಾಸಗಿಯಾಗಿ ತನ್ನ ಸಂಶೋಧನೆಗಳನ್ನು ನಡೆಸಿದ. ರೊಮಾನ್ಸ್ ಭಾಷೆಗಳಲ್ಲಿ ಮತ್ತು ಮಧ್ಯಕಾಲೀನ ಇತಿಹಾಸದಲ್ಲಿ ಕ್ರಾಪ್ಪೆಗೆ ವಿಶೇಷವಾದ ಪರಿಶ್ರಮವಿತ್ತು. ಆದರೆ ಜಾನಪದದಲ್ಲಿ ಈತನ ಹೆಸರು ವಿಶೇಷ ಉಲ್ಲೇಖಕ್ಕೆ ಅರ್ಹವಾಗಿದೆ. ಜಾನಪದದ ವಿವಿಧ ಮುಖಗಳನ್ನು ಕುರಿತು ಕ್ರಾಪ್ಪೆ ವಿಪುಲವಾಗಿ ಬರೆದಿದ್ದಾನೆ. ಪುರಾಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಂಶೋಧನೆಗಳನ್ನು ನಡೆಸಿ ಗ್ರಂಥಗಳನ್ನು ಪ್ರಕಟಿಸಿದ್ದಾನೆ. 1930ರಲ್ಲಿ ಪ್ರಕಟವಾದ ದಿ ಸೈನ್ಸ್ ಆಫ್ ಫೋಕ್‍ಲೋರ್ ಎಂಬ ಇವನ ಗ್ರಂಥ ಜಾನಪದ ಸ್ವರೂಪವನ್ನು ಚರ್ಚಿಸುವ ಕೆಲವೇ ಗ್ರಂಥಗಳಲ್ಲಿ ಒಂದಾಗಿದ್ದು, ಇಂದಿಗೂ ಮಹತ್ವದ್ದಾಗಿದೆ. ಎರಡು ಸಂಪುಟಗಳಲ್ಲಿ ಪ್ರಕಟವಾಗಿರುವ ಡಿಕ್ಷನರಿ ಆಫ್ ಫೋಕ್‍ಲೋರ್ ಮೈಥಾಲಜಿ ಅಂಡ್ ಲೆಜೆಂಡ್ ಗ್ರಂಥದ ನಾಲ್ವರು ಸಮಾಲೋಚಕರಲ್ಲಿ ಕ್ರಾಪ್ಪೆಯೂ ಒಬ್ಬ.     								*
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ